ನಾಗೇಂದ್ರರಾವ್, ರಟ್ಟೇಹಳ್ಳಿ
1896-1978. ಕರ್ನಾಟಕದ ರಂಗಭೂಮಿ ಹಾಗೂ ಚಲನಚಿತ್ರರಂಗದ ಶ್ರೇಷ್ಠ ನಟ.ಕನ್ನಡದ ಮೊದಲ ವಾಕ್ಚಿತ್ರ ಸತೀ ಸುಲೋಚನಾ  (1934)ರ ಪ್ರಭಾವ ನಟ, ಸಂಗೀತ ನಿರ್ದೇಶಕ ಹಾಗೂ ಗಾಯಕ. ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ರಟ್ಟೇಹಳ್ಳಿ ಗ್ರಾಮದಲ್ಲಿ. ತಂದೆ ರಟ್ಟೇಹಳ್ಳಿ ಕೃಷ್ಣರಾವ್ ಹಾಗೂ ತಾಯಿ ರುಕ್ಮಿಣೀದೇವಿ. ಹೊಳಲಕೆರೆಯಲ್ಲಿ ನೆಲಸಿದ್ದ ಈ ದಂಪತಿಗಳು ಮಾಧ್ವ ಬ್ರಾಹ್ಮಣರು.

    	ಪಿತೃವಿಯೋಗದಿಂದಾಗಿ ಇವರ ವಿದ್ಯಾಭ್ಯಾಸ ಪ್ರೌಢಶಾಲೆಗೇ ಸೀಮಿತವಾಯಿತು. ವಿದ್ಯೆಯ ಬಗ್ಗೆ ಅಪಾರ ಆಸಕ್ತಿ ಶ್ರದ್ಧೆಗಳಿದ್ದರೂ ಸಂಸಾರ ನಿರ್ವಹಣೆಗಾಗಿ ವಿದ್ಯೆಗೆ ಶರಣು ಹೊಡೆಯಬೇಕಾಯಿತು. ಆದರೆ ರಾಯರಿಗೆ ಚಿಕ್ಕಂದಿನಿಂದಲೂ ಕಲೆಯ ಬಗ್ಗೆ ಆದರ, ಆಸಕ್ತಿ, ತಮ್ಮ ಅಲ್ಪಕಾಲದ ಶಾಲಾಜೀವನದಲ್ಲೂ ನಾಟಕಾಭಿನಯದಲ್ಲಿ ಜನಪ್ರಿಯತೆ ಗಳಿಸಿದ್ದರು. ಅಚ್ಚ ಬಿಳುಪು ಮೈಬಣ್ಣ, ದುಂಡು ಮುಖ, ಮೈಕೈ ತುಂಬಿಕೊಂಡಿದ್ದ ರಾಯರ ವ್ಯಕ್ತಿತ್ವ ಸ್ತ್ರೀಪಾತ್ರಗಳಿಗೆ ಹೇಳಿ ಮಾಡಿಸಿದಂತಿತ್ತು. ಅಲ್ಲದೆ ಅಂದಿನ ಕಾಲದ ರಂಗಭೂಮಿಯಲ್ಲಿ. ಗಂಡಸರೇ ಸ್ತ್ರೀ ಪಾತ್ರಧಾರಿಗಳಾಗಿರುತ್ತಿದ್ದರು. ವಿದ್ಯೆಗೆ ಶರಣು ಹೊಡೆದ ರಾಯರು ತಮ್ಮ ಅಭಿನಯ ಕಲೆಯನ್ನೇ ಒಂದು ವಿದ್ಯೆಯನ್ನಾಗಿ ಅಭ್ಯಾಸ ಮಾಡಿದರು. ಶಾಲೆಯ ರಂಗಭೂಮಿಯ ಅನುಭವ ವೃತ್ತಿಪರ ರಂಗಭೂಮಿಯ ಕಡೆಗೆ ವಾಲಿತು. ಚಂದ್ರಹಾಸ ನಾಟಕದಲ್ಲಿ ವಿಷಯೆಯ ಪಾತ್ರವಹಿಸಿದ್ದ ರಾಯರ ಅಭಿನಯ ಮೆಚ್ಚಿದ ಶಿರಹಟ್ಟಿ ವೆಂಕೋಬರಾಯರು ಇವರನ್ನು ತಮ್ಮ ಶ್ರೀಲಕ್ಷ್ಮೀವಿಲಾಸ ಪ್ರಾಸಾದಿಕ ನಾಟಕ ಮಂಡಲಿಯ ಕಲಾವಿದರ ಬಳಗಕ್ಕೆ ಸೇರಿಸಿಕೊಂಡರು. ಅವರೇ ಇವರ ರಂಗಭೂಮಿಯ ಪ್ರಥಮ ಗುರುಗಳಾದರು. ಅನಂತರ ರಾಯರು ಲಕ್ಷ್ಮೀವಿಲಾಸ ಥಿಯೇಟ್ರಿಕಲ್ ಕಂಪನಿಯಲ್ಲಿದ್ದು (ತುಲಸೀತೋಟದ ಕಂಪನಿ) ಅಲ್ಲಿಂದ ಕರ್ನಾಟಕದ ನಟಸಾರ್ವಭೌಮ ಎನಿಸಿದ ವರದಾಚಾರ್ಯರಲ್ಲಿ ಸೇರಿ ಅವರ ಮಾರ್ಗದರ್ಶನದಲ್ಲಿ ಅಪಾರ ಕೀರ್ತಿ ಗಳಿಸಿದರು. ಆಚಾರ್ಯರ ರತ್ನಾವಳಿನಾಟಕ ಸಭೆಯ ಅವನತಿಯಿಂದ ಶ್ರೀಚಾಮುಂಡೇಶ್ವರೀ ಕರ್ನಾಟಕ ನಾಟಕ ಸಭಾದ ಮೇಲ್ವಿಚಾರಕರಾಗಿ ಸೇರಿದರು. ರಾಯರು ತಮ್ಮ ಮಿತ್ರರೊಬ್ಬರ ಸಲಹೆಯಂತೆ ರಂಗಭೂಮಿಯ ಖ್ಯಾತನಟ ಸುಬ್ಬಯ್ಯ ನಾಯಿಡು ಅವರ ಶ್ರೀಸಾಹಿತ್ಯಸಾಮ್ರಾಜ್ಯ ನಾಟಕ ಮಂಡಲಿಯ ಪಾಲುದಾರರಾಗಿ ನಿಂತು ತಮ್ಮ ರಂಗಭೂಮಿಯ ನಾಟಕಗಳಲ್ಲಿ ಒಂದು ಹೊಸ ಆಯಾಮ ನಿರ್ಮಿಸಿದರು. ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಯಲ್ಲಿ ರಾಯರರು ಅಭಿನಯಿಸಿದ ಪ್ರಮುಖ ಪಾತ್ರಗಳೆಂದರೆ ಶಾಕುಂತಲಾ ನಾಟಕದಲ್ಲಿ ಶಕುಂತಳೆ, ಶೂರಸೇನ ಚರಿತ್ರೆಯ (ಆಂಗ್ಲ ಒಥೆಲೋ ನಾಟಕದ ಕನ್ನಡ ಅನುವಾದ) ಡೆಸ್‍ಡೆಮೋನಳ ಪಾತ್ರ. ಪ್ರಹ್ಲಾದ ಚರಿತ್ರೆಯ ಭೂದೇವಿ, ಮನ್ಮಥವಿಜಯದ ರತೀದೇವಿ, ರಾಮವರ್ಮ ಲೀಲಾವತಿಯ ಲೀಲಾವತಿ ಹಾಗೂ ಪಾರಿಜಾತಪುಷ್ಪಹರಣ, ಭೂಕೈಲಾಸಗಳ ನಾರದ, ಭೂದೇವಿ ಹಾಗೂ ನಾರದನ ಪಾತ್ರಗಳಲ್ಲಿ ರಾಯರ ಜನಪ್ರಿಯತೆ ಮುಗಿಲಿಗೇರಿತು. ಇಲ್ಲಿಗೆ ರಾಯರ ರಂಗಭೂಮಿಯ ಅನುಭವ ಎರಡು ದಶಕಗಳಿಗೆ ಬಂದಿತ್ತು.

    	ರಂಗಭೂಮಿಯಲ್ಲಿ ಜನಪ್ರಿಯತೆ ಹೆಚ್ಚಿದಂತೆ ನಾಗೇಂದ್ರರಾಯರಿಗೆ ಚಿತ್ರರಂಗದ ಗೀಳು ಪ್ರಾರಂಭವಾಯಿತು. ತಮ್ಮ 36ನೆಯ ವಯಸ್ಸಿನಲ್ಲಿ ಇವರು ಕೆ.ವಿ. ಅಯ್ಯರ್ ಅವರ ಶಿಫಾರಸು ಪತ್ರವೊಂದರೊಡನೆ ಮುಂಬಯಿನಲ್ಲಿದ್ದ ಮೂಕಚಿತ್ರದ ನಾಯಕ ರಾಜಾ ಸ್ಯಾಂಡೋರವರನ್ನು ಭೇಟಿಯಾಗಿ ಅವರ ಪ್ರಯತ್ನದಿಂದ ರಜತರಂಗ ಪ್ರವೇಶ ಮಾಡಿದರು.

	ಕನ್ನಡದÀ ಮೊದಲ ವಾಕ್ಚಿತ್ರ ಸತೀ ಸುಲೋಚನಾ (1934) ಚಿತ್ರದಲ್ಲಿ  ರಾವಣನಪಾತ್ರವನ್ನು  ನಿರ್ವಹಿಸಿದ್ದಲ್ಲದೆ ಚಿತ್ರಕ್ಕೆ ಸಂಗೀತ ನೀಡಿ ಕನ್ನಡದ ಮೊದಲ ಸಂಗೀತ ನಿರ್ದೇಶಕರೆಂದು  ಹಿರಿಮೆ ಇವರಿಗೆ ಸಂದಿದೆ.
ವಸಂತ ಸೇನಾ (1941)ಚಿತ್ರದಲ್ಲಿ ಶಕಾರನಾಗಿ ನೀಡಿದ ಅಭಿನಯವೂ ಸ್ಮರಣೀಯ. ರಾಯರು ಈ ಚಿತ್ರಕ್ಕೆ  ಪಟಕಥೆ ಹಾಗೂ ಸಂಭಾಷಣೆಗಳನ್ನು ಬರೆದರು. ನಾಗೇಂದ್ರರಾಯರ ಸಹ ನಿರ್ಮಾಣದ  ಮೊದಲ ಚಿತ್ರ ಹರಿಶ್ಚಂದ್ರ (1947)ದಲ್ಲಿ ನಾರದನ ಪಾತ್ರ ನಿರ್ವಹಿಸುವುದರ ಜೊತೆಗೆ  ಸಂಭಾಷಣೆ ಹಾಗೂ  ಚಿತ್ರಕಥೆ ರಚಿಸಿದ್ದಾರೆ ಜಾತಕ ಫಲ ಆರ್.ಎನ್.ಆರ್. ಲಾಂಛನದ  ಮೊದಲ ಚಿತ್ರ. ನೀತಿಭೋದಕ ಹಾಸ್ಯ ಪ್ರಧಾನ ಯಶಸ್ವಿ ಚಿತ್ರ. ತೆಲುಗು ಭಾಷೆಯಲ್ಲೂ ನಿರ್ಮಾಣವಾಯಿತು. 
ಪ್ರೇಮರಪುವು (1958) ರಾಮೀರ ನಿರ್ದೇಶನದ ಅಭಿನಯದ ಚಿತ್ರ. ರಾಷ್ಟ್ರಪತಿಗಳ ರಜತ ಪದಕ ಪುರಸ್ಕಾರ ಪಡೆದ ಚಿತ್ರ. ವಿಜಯನಗರ ವೀರ ಪುತ್ರ (1941) ವರ್ಣ ಚಿತ್ರದ ಮೂಲಕ ನಾಗೇಂದ್ರರಾಯರು ತನ್ನ ಪುತ್ರ ಆರ್.ಎನ್. ಸುದರ್ಶನನ್ನು ನಾಯಕ ನಟನಾಗಿ ಪರಿಚಯಿಸಿದರು. 

ರಾಯರ ಇನ್ನಿಬ್ಬರು ಪುತ್ರರಾದ ಆರ್.ಎನ್.ಜಯಗೋಪಾಲ್ ಈ ಚಿತ್ರಕ್ಕೆ ಗೀತೆಗಳನ್ನು ಬರೆದಿದ್ದಾರೆ. ಆರ್.ಎನ್.ಕೃಷ್ಣಪ್ರಸಾದ್ ಛಾಯಾಗ್ರಹಣ ಮಾಡಿದ್ದಾರೆ.

ನಾಗೇಂದ್ರರಾಯರು ಕನ್ನಡವಲ್ಲದೆ ಹಿಂದಿ ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜೆಮಿನಿ ಸಂಸ್ಥೆಯವರು ತಯಾರಿಸಿದ ಅಪೂರ್ವ ಸಹೋದರಗಳ ಚಿತ್ರದಲ್ಲಿ  ಮಾರ್ತಾಂಡ ವರ್ಮನ ಪಾತ್ರದಲ್ಲಿ ಇವರ ಅಭಿನಯ ಪರಾಕಾಷ್ಟೆಯನ್ನು ಮುಟ್ಟಿತು.

ಹಣ್ಣೆಲೆ ಚಿಗುರಿದಾಗ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜ್ಯ ಸರಕಾರದ  ಶ್ರೇಷ್ಠ ನಟ ಪ್ರಶಸ್ತಿ ಪಡೆದರು. ರಾಯರನ್ನು  1976 ರಲ್ಲಿ  ರಾಜ್ಯ  ಸಂಗೀತ ನಾಟಕ ಅಕಾಡಮಿ ಗೌರವಿಸಿದೆ. ಇವರು ಕೇಂದ್ರ ಸರಕಾರದ ಪದ್ಮಶ್ರೀ ಪ್ರಶಸ್ತಿ ಭಾಜನರು. ಇದು ನನ್ನ ಕಥೆ ರಾಯರ ಆತ್ಮ ಚರಿತ್ರೆ ಯಾವ  ಜನರಿಗೆ ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಪುಸ್ತಕರೂಪದಲ್ಲೂ ಪ್ರಕಟವಾಗಿದೆ.	ರಾಯರು ಚಿತ್ರನಿರ್ಮಾಣದಲ್ಲಿ, ನಿರ್ದೇಶನದಲ್ಲಿ  ನಡೆಸಿದ ಪ್ರಯೋಗಗಳು ಹಲವಾರು. ಕನ್ನಡ ರಂಗಭೂಮಿ ಮತ್ತು  ಚಿತ್ರರಂಗದ ಭೀಷ್ಮ 1973 ರಲ್ಲಿ  ತಮ್ಮ 81ನೇ ವಯಸ್ಸಿನಲ್ಲಿ  ನಿಧನ ಹೊಂದಿದರು.		
	(ಬಿ.ಎಸ್.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ